ತೋಮರರು -
	ಶೌರ್ಯ ಸಾಹಸಗಳಿಗಾಗಿ ಪ್ರಸಿದ್ಧವಾದ ಒಂದು ರಜಪೂತ ಬಣದವರು. ಇವರು ರಾಜ್ಯವಾಳಿದ್ದು ಉತ್ತರ ಭಾರತದಲ್ಲಿ. ದಿಲ್ಲಿ ಮತ್ತು ಸುತ್ತಲಿನ ಪ್ರದೇಶ ಇವರ ಉತ್ತರಾಧಿಕಾರಿ ಎರಡನೆಯ ಅನಂಗಪಾಲ ದಿಲ್ಲಿಯಲ್ಲಿ ಮಹತ್ತ್ವದ ಸ್ಥಾನವಾಯಿತು. (1052). ಕುತುಬ್‍ಮಿನಾರ್ ಪಕ್ಕದಲ್ಲಿರುವ ಲೋಹಸ್ತಂಭವನ್ನು ತಂದು ನೆಟ್ಟವನು ಇವನೇ. ಇಲ್ಲಿ ಈತ ಅನೇಕ ದೇವಾಲಯಗಳನ್ನು ಕಟ್ಟಿಸಿದ. ಮುಂದೆ ಮಹಮದೀಯರ ದಾಳಿಯಲ್ಲಿ ಅವೆಲ್ಲ ನಾಶವಾದವು.

ತೋಮರರು ಚೌಹಾಣರೊಂದಿಗೆ ಮೇಲಿಂದ ಮೇಲೆ ಯುದ್ಧ ಮಾಡಬೇಕಾಗುತ್ತಿತ್ತು. 1153 ರಲ್ಲಿ ದಿಲ್ಲಿ ಚೌಹಾಣರ ಕೈವಶವಾಗಿ ತೋಮರರು ಚೌಹಾಣರ ಸಾಮಂತರಾದರು. ಪ್ರಥ್ವಿರಾಜ ಚೌಹಾಣನ ಸೋಲಿನ ಅನಂತರ ದಿಲ್ಲಿ ಮುಸಲ್ಮಾನರ ವಶವಾಯಿತು. ತೋಮರರು ಬೇರೆ ಬೇರೆ ಪ್ರದೇಶಗಳಲ್ಲಿ ಹರಡಿದರು. ಉತ್ತರ ಪ್ರದೇಶದಲ್ಲಿ ತೋಮರರು ಚಿಕ್ಕಪುಟ್ಟ ಸಂಸ್ಥಾನಗಳನ್ನು ಆಳಿದ ಉಲ್ಲೇಖಗಳಿವೆ. ಅನಂತರ ಮಧ್ಯ ಪ್ರದೇಶದಲ್ಲಿ ತೋಮರರ ಏಳಿಗೆ ಕಂಡುಬರುತ್ತದೆ. ಪಿರೋಜ್ ಶಾಹ ತೊಗಲಕನ ಕಾಲದಲ್ಲಿ ತೋಮರರ ಒಂದು ಶಾಖೆಯವರು ಗ್ವಾಲಿಯರನ್ನು ವಶಪಡಿಸಿಕೊಂಡು ತಮ್ಮ ರಾಜ್ಯ ಸ್ಥಾಪಿಸಿದರು. ಗ್ವಾಲಿಯರಿನಲ್ಲಿ ಇವರು ಸು. 150 ವರ್ಷ ರಾಜ್ಯಭಾರ ನಡೆಸಿದರು. ಕಲೆ ಸಾಹಿತ್ಯಗಳ ಬೆಳವಣಿಗೆಗೆ ಈ ವಂಶ ಸಾಕಷ್ಟು ಪ್ರೋತ್ಸಾಹ ಕೊಟ್ಟಿತು. ಗ್ವಾಲಿಯರ್ ಪಟ್ಟಣದ ಮೇಲೆ ಮಹಮದೀಯರ್ ಅನೇಕ ದಾಳಿಗಳಾದರೂ ತೋಮರರು ಸುಲಭವಾಗಿ ಸೋಲಲಿಲ್ಲ. 1581 ರಲ್ಲಿ ಇಬ್ರಾಹಿಮ್ ಲೋದಿ ಈ ಪಟ್ಟವನ್ನು ವಶಪಡಿಸಿಕೊಂಡ. ಇವರ ಆಳ್ವಿಕೆ ಕೊನೆಗೊಂಡಿತು. ಈ ಶಾಖೆಯ ಪ್ರಮುಖ ದೊರೆ ಮಾನ್‍ಸಿಂಗ್. ಇವನ ಆಳ್ವಿಕೆಯಲ್ಲಿ ಅನೇಕ ಕಟ್ಟಡಗಳನ್ನು ಕಟ್ಟಲಾಯಿತು.							(ಆರ್.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ